Tuesday, September 16, 2008

ಸೂಚನೆ

ನನ್ನ ಬಾಲ್ಕನಿಯ ಜಾಗ ಬದಲಾಗಿದೆ. ಹೊಸ ವಿಳಾಸ :
kenecoffee.wordpress.com  

Friday, September 12, 2008

ಬೀಗ ತೆರೆದಾಗ........

 ಕತ್ತಲೆ ಕೋಣೆಯ ನಡುವಿನ ಕಪ್ಪು ಕಿಟಕಿ ತೆರೆದೆ 
ಶತಮಾನಗಳ ಹಳೆಯ ಕಪಾಟು ಕಿರುಗುಟ್ಟಿತು 
ಅದರೆದೆಯ ಮಾಸಲು ಗಾಜಿನಲ್ಲಿ ನನ್ನ ಪ್ರತಿಬಿಂಬ ಎಷ್ಟನೆಯದೋ 

ಮುರಿದ ಕಾಲಿನ ಖುರ್ಚಿ ಹತ್ತಿ ಮೇಲೆ ಇಣುಕಿದರೆ  
ಎಂದೋ ಇಟ್ಟು ಮರೆತ ಪೆನ್ನು 
ಹರಿದ ಪಾಟೀಚೀಲ, ಬಳೆಚೂರು..... 
ಸತ್ತ ಹಾತೆಯ ರೆಕ್ಕೆಗೂ ವರ್ಷಗಳ ಇತಿಹಾಸ ! 

ಕೋಣೆಯ ಕಮಟು ವಾಸನೆ, ಅಪರೂಪಕ್ಕೆ ಬಿದ್ದ ಇಳಿಬಿಸಿಲು
ಏಕಾಂತ ಸುಖ 
ನಮದಿಬ್ಬರದು ಈಗ ದೂರದ ನೆಂಟಸ್ತನ 

ಕಪಾಟಿನೊಳಗಿನದು ಹೊಸದೇ ಪ್ರಪಂಚ  
ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ  
ಬಚ್ಚಿಟ್ಟು ಕಳೆದುಕೊಂಡ ಪ್ರೀತಿ,  
ಕದ್ದು ನೋಡುವ ನಗ್ನ ಚಿತ್ರ  
ಎಲ್ಲ ಬಯಲಾಗಿಬಿಡಬಹುದೇನೋ ....  

ಸ್ವಾತಂತ್ರ್ಯದ ಕಥೆ, ವಚನ ಭಾರತ ಅಜ್ಜನದ್ದಿರಬಹುದು  
ಕಸ್ತೂರಿಯ ಹರಿದ ಪುಟಗಳು, ಹಳೆಯ ತರಂಗ ಅಣ್ಣನದ್ದೇ ಸಂಗ್ರಹ  
ಅಮ್ಮ ಇಟ್ಟು ಮರೆತ ಹಾಡಿನ ಪಟ್ಟಿಯಲ್ಲವೇ ಇದು? 
ಕಾಲು ಮುರಿದ ಚಂದದ ಗೊಂಬೆ ನಂಗೆ ಅಪ್ಪ ತಂದುಕೊಟ್ಟಿದ್ದು 

ಕೋಣೆಯಲ್ಲಿನ ಪ್ರೀತಿಗೆ ಕಪಾಟು ನಾಚಿದ್ದಿರಬಹುದು  
ಜಗಳಗಳೂ ಹೊಸತೇನಲ್ಲ  
ಹೆಂಗಸರಿಗೆ೦ತದ್ದೋ ಸಂಶಯ  
ಕಪಾಟು ಗುಟ್ಟು ಬಿಟ್ಟುಕೊಟ್ಟ ನೆನಪಿಲ್ಲ 

ಕಪಾಟೊಳಗಿನ ಕನ್ನಡಿಯಲ್ಲಿ ಮುಖ ಕಾಣುವುದಿಲ್ಲ  
ಎಲ್ಲೆಡೆ ಎರಡಿಂಚು ನೆನಪಿನ ಧೂಳು ...... 
ವಿನ್ಯಾಸದ ಬಾಗಿಲಿಗೆ ಅಲ್ಲಲ್ಲಿ ಗಾಯದ ಗುರುತು  
ನುಸಿ ಗುಳಿಗೆಗಳು ಲಡ್ಡಾಗಿವೆ, ಗೆದ್ದಲಿಗೀಗ ನೆಮ್ಮದಿ 

ಬಾಗಿಲು ಮುಚ್ಚಿ ಮೇಲೊಂದು ಚಿಕ್ಕ ಬೀಗ ಅಷ್ಟೆ  
ಕಪಾಟು ಮಾತನಾಡುವುದಿಲ್ಲ  
ಕರುಬುತ್ತೇನೆ ನಾನು ಕಪಾಟಿನ ಗಟ್ಟಿತನಕ್ಕೆ  
ಮೌನ ನನ್ನಿಂದಾಗದ ಮಾತು  

ನನ್ನ ಮನದ ಕಪಾಟಿಗೆ ಬೀಗವಿಲ್ಲ  
ನನ್ನೆಲ್ಲ ಭಾವಗಳನ್ನೂ ಇಟ್ಟುಕೊಳ್ಳಬಹುದಿತ್ತು ಕಪಾಟು  
ನಾನು ಸುಖಿಯಾಗುತ್ತಿದ್ದೆ ...... 

Monday, September 8, 2008

ಹಾಗೇ ಸುಮ್ಮನೇ.....

ನೆನಪುಗಳ ಮೆರವಣಿಗೆ ಸಾಗುತ್ತಿತ್ತು.
ಖುಷಿಯ ನೆನಪು, ದುಖಃದ ನೆನಪು, ಬಾಲ್ಯದ ನೆನಪು, ಅವಮಾನದ ನೆನಪು, ಪ್ರೀತಿಯ ನೆನಪು, ದ್ವೇಷದ ನೆನಪು.... ಎಲ್ಲವೂ ಒಂದರ ಹಿಂದೊಂದು ಹೊರಟಿದ್ದವು. ಮೌನವೂ ಜೊತೆಗೇ ಹೆಜ್ಜೆ ಹಾಕುತ್ತಿತ್ತು.
ನೆನಪುಗಳು ಸುಮ್ಮನೇ ಹೇಗಿದ್ದಾವು ?
ಬಾಲ್ಯದ ನೆನಪು ಮೆಲ್ಲನೆ ಹೇಳಿತು, ಜನರಿಗೆ ನಾನೆಂದರೆ ಹೆಚ್ಚು ಪ್ರೀತಿ. ಮತ್ತೆ ಮತ್ತೆ ನನ್ನ ಕರೆಯಲು ಇಷ್ಟಪಡ್ತಾರೆ ಈ ಜನ. ಅಷ್ಟರಲ್ಲಿ ದುಖಃ ಹೇಳಿತು, ಇಷ್ಟ ಇಲ್ಲದಿದ್ರೂ ನನ್ನ ಬೇಡಿಕೆ ಹೆಚ್ಚಿದೆ ಬಿಡಿ. ನಾನೇ ಹೆಚ್ಚು ಪವರ್ ಫುಲ್ !
ಪ್ರೀತಿಯ ನೆನಪಿಗೆ ಸಿಟ್ಟು ಬಂತು. ನೀವೆಲ್ಲ ಹಾಗಂದುಕೊಂಡಿದ್ದೀರಿ ಅಷ್ಟೇ, ಸುಮ್ಮನಿದ್ದಾಗೆಲ್ಲ ನೆನಪಾಗೋದು ನಾನು. ಜಗತ್ತಿನ ಸುಂದರ ನೆನಪೆ೦ದರೆ ನಾನೇ...... ಎಲ್ಲರೂ ಇಷ್ಟೆಲ್ಲ ಹೇಳಿದ ಮೇಲೆ ದ್ವೇಷ ಬಿಟ್ಟೀತೆ? ನಾ ಹೋಗದಿದ್ದರೆ ಜನರಿಗೆ ಸಮಾಧಾನ ಹೇಗೆ ಹೇಳ್ರೋ... ನಾ ಬೇಕೇ ಬೇಕು.... ಎಲ್ಲ ನೆನಪುಗಳೂ ಕಿತ್ತಾಡತೊಡಗಿದವು.... ಎಷ್ಟು ನೆನೆಪು ಮಾಡಿದರು ನೆನಪಾಗದ ನೆನಪೊಂದು ಕೂಡ ಅವರೊಳಗೇ ಸೇರಿಕೊಂಡಿತು.

ಮೌನ ಕಿವಿ ಮುಚ್ಚಿಕೊಂಡಿತು! ಮೆರವಣಿಗೆಯಲ್ಲಿ ಗದ್ದಲವೋ ಗದ್ದಲ.

ಒಂದು ನಿಮಿಷ ಅಷ್ಟೇ,

ತುಂಬಾ ಸಮಯದಿಂದ ಎಲ್ಲವನ್ನೂಸುಮ್ಮನೇ ಕೇಳುತ್ತಾ ಎಲ್ಲರ ಹಿಂದಿನಲ್ಲಿ ಬರುತ್ತಿದ್ದ ಮರೆವು ''ನಾನು ಬಿಟ್ಟರೆ ತಾನೇ ನಿಮಗೆಲ್ಲ ದಾರಿ'' ಎನ್ನುತ್ತಾ ಎಲ್ಲ ನೆನಪುಗಳನ್ನು ದಾಟಿ ನಗುತ್ತಾ ಮುಂದೆ ಹೋಗಿಬಿಟ್ಟಿತು!!

Wednesday, September 3, 2008

ಕನಸು - ವಾಸ್ತವ

ಚಂದ್ರನ ಮೇಲಿರುವ ಪುಟ್ಟ ಮೊಲ, ಜೊತೆಗಿರುವ ತಾರೆಗಳೊಂದಿಗೆ 
ಆಟವಾಡುವ ಕನಸು ಕಾಣುತ್ತಿದ್ದೆ
ಮಣಭಾರದ ಪಾಟೀಚೀಲ ವಾಸ್ತವವವಾಗಿತ್ತು  

ಮೋಡಗಳ ನಡುವಿಂದ ಬರುವ ರಾಜಕುಮಾರನೊಡನೆ
ಮೈ ಮರೆಯುತ್ತಿದ್ದೆ
ಹಗಲುಗನಸಷ್ಟೇ ವಾಸ್ತವವಾಗಿತ್ತು

ಬೆನ್ನಿಗೊ೦ದು ರೆಕ್ಕೆಯಿದ್ದು
ಜಗವೆಲ್ಲ ಜಯಿಸುವ ತವಕದಲ್ಲಿದ್ದೆ
ಇಟ್ಟ ಹೆಜ್ಜೆಗಳ ಗುರುತೂ ಮೂಡದಿದ್ದುದು ವಾಸ್ತವವಾಗಿತ್ತು

ಯಾರ ಹಂಗಿಲ್ಲದೇ ಬದುಕಿಬಿಡುವ ಕನಸಿತ್ತು
ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುವ ನೆರಳುಗಳು
ವಾಸ್ತವವಾಗಿತ್ತು

ಕನಸು ಕಾಣುವ ದಿನಗಳೀಗ ಕರಗಿವೆ
ಮಗ್ಗುಲು ಬದಲಿಸಿದರೆ ಅವನ ಉಸಿರಿನ ಜತೆ

ವಾಸ್ತವವೇ ಕನಸಾಗಬೇಕು ಕಣೇ
ಎಂಬುದವನ ಉವಾಚ
ಹರೆಯದ ಕನಸುಗಳಿಗೆ ರೆಕ್ಕೆಗಳಿಲ್ಲದಿದ್ದರೇ ಚೆಂದ....

ಬದುಕು ಬದಲಾಗುತ್ತಿದೆ
ನೆನಪುಗಳಿಗೆಲ್ಲ ಪರದೆ ಹಾಕಿದ್ದೇನೆ
ಇಳೆಗಿಳಿದ ಮಳೆಹನಿಯ ಜೊತೆಯಲ್ಲೇ
ನನ್ನ ಹೆಜ್ಜೆಗಳಿಗೂ ದಾರಿ

ವಾಸ್ತವಕ್ಕೆ ಜೊತೆಯಾದವನೊಂದಿಗೆ
ನಿಂತಲ್ಲೇ ಬೇರೂರುವ ಮುನ್ನ 
ಒಂದೇ ಒಂದು ಕನಸು

ಬಾಲ್ಯ ಮರಳಿ ಸಿಕ್ಕಿದರೆ
ಕಾಲ ಅಲ್ಲೇ ನಿಂತುಬಿಡಲಿ...........................

ಕೆಲವು ಹಾಯ್ಕುಗಳು...

ಹಾದಿಯ ತುಂಬೆಲ್ಲ ಕನಸುಗಳ ಚೆಲ್ಲಿಕೊಂಡಿದ್ದೇನೆ
ನೆನೆಪಿನ ನೆರಳುಗಳಿನ್ನು ಉದ್ದವಾಗುವುದಿಲ್ಲ.....

-+-+-+-+-+-+-+-+-+-+-+-+-+-+-+-+-+-+

ಕೂದಲ ಸಿಕ್ಕುಗಳಲ್ಲೆಲ್ಲ ನಿನ್ನ ನೆನಪಿತ್ತು
ಬಾಚನಿಕೆಗೆ ನಾನು ಶತ್ರುವಾಗಿದ್ದೇನೆ !

-+-+-+-+-+-+-+-+-+-+-+-+-+-+-+-+-+-+

ನನ್ನ ರಾತ್ರಿಗಳೀಗ ನಿರಾಳವಾಗಿವೆ
ಚಂದ್ರನೇ, ಕನಸು ಕದಿಯುವುದು ತಪ್ಪು...!

Thursday, August 28, 2008

ನಾನು ಮತ್ತು ಬಾಲ್ಕನಿ.....

ಇವತ್ತು ಬಾಲ್ಕನಿ ಒದ್ದೆ ಒದ್ದೆ.........
ಬೆಳಗಿನಿಂದಲೂ ಹೀಗೇ, ಮೂಡ್ ಆಫ್ ಮಾಡಿಕೊಂಡಂತಿರುವ ಆಕಾಶ.  
ಇನ್ನೇನು ಅತ್ತೇ ಬಿಡುವಂತೆ......

ಮಳೆ ಬರುವ ಮುಂಚೆ ಕಪ್ಪಿಟ್ಟ ಮುಗಿಲು, ಥ೦ಡಿ ಗಾಳಿ, ನಿದ್ದೆಗಣ್ಣಿನ, ತೂಕಡಿಸುವ ವಾತಾವರಣ.
ಆಹಾ...! ಎಷ್ಟು ರೊಮ್ಯಾಂಟಿಕ್ ಕಣೇ.....ಎಂದುಕೊಳ್ಳುವ ಹಂತ ದಾಟಿಬಿಟ್ಟಿದ್ದೇನೆ.
ಮನಸಲ್ಲಿ ಎಂತದೋ ದುಗುಡ ತುಂಬಿಕೊಂಡ ಅಳುಮುಖದ ಹುಡುಗನ ಹಾಗೆ 
ಆಕಾಶ ಅಂತೆಲ್ಲ ಅನಿಸಲು ಶುರುವಾಗಿರುವುದು ಈಗೀಗ ಅಷ್ಟೇ......

ಕಂಹೀ ದೂರ್ ಜಬ್ ದಿನ್ ಡಲ್ ಜಾಯೇ
ಸಾಂಜ್ ಕೀ ದುಲ್ಹನ್  ಬದನ್ ಚುರಾಯೇ
ಚುಪ್ ಕೈಸೆ ಆಯೆ ........
ಅಂತ ಜಗಜಿತ್ ರ ಗಜ಼ಲ್ ಬ್ಯಾಕ್‌ಗ್ರೌಂಡ್ ನಲ್ಲಿ ಹಾಕಿ ಕುಳಿತು ಬಿಟ್ಟರಂತೂ ಬಾಲ್ಕನಿಯಲ್ಲಿ 
ನೆನಪುಗಳ ಸಂತೆ........

ಮನೆ ಕೆಳಗಿನ ಚಂದದ ಟಾರು ರಸ್ತೆಯ ಮೇಲೆ ರಪರಪನೆ ಮಳೆ ಸುರಿವ ಕ್ಷಣಗಳು ನನ್ನ ಫೆವರಿಟ್ !  
ನಮ್ಮ ಹಿಂದಿ ಸಿನೆಮಾದ ಹೀರೋಯಿನ್ ಗಳಂತ ಜೋರು ಮಳೆ ಬರುವಾಗ ಖಾಲಿ ರಸ್ತೆಯಲ್ಲಿ  
ಒಮ್ಮೆಯದಾದ್ರೂ ತಕತಕ ಕುಣಿದುಬಿಡಬೇಕು ಅಂತ ಮಳೆ ಬಂದಾಗೆಲ್ಲ ಯೋಚಿಸುತ್ತೇನೆ!
ಆದ್ರೆ ಅವೆಲ್ಲ್ಲ ಆಗೋ ಹೋಗೋ ಮಾತೇ? "ಇಷ್ಟು ಸಣ್ಣ ವಯಸ್ಸಿಗೇ ಹೇಗಾಗಿಹೋಗಿದೆ ನೋಡಿ ಪಾಪ "ಅಂದುಕೊಳ್ಳುತ್ತ ನಡೆದುಬಿಟ್ಟಾರು ನಮ್ಮ ಜನ ಆಮೇಲೆ!!

ನಂದು ಬಿಡಿ, ಪ್ರತಿದಿನ ಬಾಲ್ಕನಿಯಲ್ಲಿ ಕೂತು ಕೈಲೊಂದು ಕಪ್ ಕೆನೆಕಾಫಿಯೊಂದಿಗೆ

ಅಪರಾತಪರ ಕನಸು ಕಾಣೋದು ಚಟವಾಗಿಬಿಟ್ಟಿದೆ

ಕನಸು ಕಾಣೋದಿಕ್ಕೇನು ಹೇಳಿ, ಕಾಸೇ, ಖರ್ಚೇ??!


ಜಗಜಿತ್ ಸಿಂಗ್ ಹಾಡು ಮುಗಿಸಿ ಸುಮ್ಮನಾಗಿದ್ದಾನೆ.

ಕಾಫಿಯಲ್ಲಿನ ಕೆನೆ ನಿಧಾನಕ್ಕೆ ಕರಗುತ್ತಿದೆ.......

ಬಾಲ್ಕನಿಯ ಮತ್ತೊಂದು ಕನಸಿಗೆ ರೆಡಿಯಾಗುತ್ತಿದೆ....................