Wednesday, September 3, 2008

ಕನಸು - ವಾಸ್ತವ

ಚಂದ್ರನ ಮೇಲಿರುವ ಪುಟ್ಟ ಮೊಲ, ಜೊತೆಗಿರುವ ತಾರೆಗಳೊಂದಿಗೆ 
ಆಟವಾಡುವ ಕನಸು ಕಾಣುತ್ತಿದ್ದೆ
ಮಣಭಾರದ ಪಾಟೀಚೀಲ ವಾಸ್ತವವವಾಗಿತ್ತು  

ಮೋಡಗಳ ನಡುವಿಂದ ಬರುವ ರಾಜಕುಮಾರನೊಡನೆ
ಮೈ ಮರೆಯುತ್ತಿದ್ದೆ
ಹಗಲುಗನಸಷ್ಟೇ ವಾಸ್ತವವಾಗಿತ್ತು

ಬೆನ್ನಿಗೊ೦ದು ರೆಕ್ಕೆಯಿದ್ದು
ಜಗವೆಲ್ಲ ಜಯಿಸುವ ತವಕದಲ್ಲಿದ್ದೆ
ಇಟ್ಟ ಹೆಜ್ಜೆಗಳ ಗುರುತೂ ಮೂಡದಿದ್ದುದು ವಾಸ್ತವವಾಗಿತ್ತು

ಯಾರ ಹಂಗಿಲ್ಲದೇ ಬದುಕಿಬಿಡುವ ಕನಸಿತ್ತು
ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುವ ನೆರಳುಗಳು
ವಾಸ್ತವವಾಗಿತ್ತು

ಕನಸು ಕಾಣುವ ದಿನಗಳೀಗ ಕರಗಿವೆ
ಮಗ್ಗುಲು ಬದಲಿಸಿದರೆ ಅವನ ಉಸಿರಿನ ಜತೆ

ವಾಸ್ತವವೇ ಕನಸಾಗಬೇಕು ಕಣೇ
ಎಂಬುದವನ ಉವಾಚ
ಹರೆಯದ ಕನಸುಗಳಿಗೆ ರೆಕ್ಕೆಗಳಿಲ್ಲದಿದ್ದರೇ ಚೆಂದ....

ಬದುಕು ಬದಲಾಗುತ್ತಿದೆ
ನೆನಪುಗಳಿಗೆಲ್ಲ ಪರದೆ ಹಾಕಿದ್ದೇನೆ
ಇಳೆಗಿಳಿದ ಮಳೆಹನಿಯ ಜೊತೆಯಲ್ಲೇ
ನನ್ನ ಹೆಜ್ಜೆಗಳಿಗೂ ದಾರಿ

ವಾಸ್ತವಕ್ಕೆ ಜೊತೆಯಾದವನೊಂದಿಗೆ
ನಿಂತಲ್ಲೇ ಬೇರೂರುವ ಮುನ್ನ 
ಒಂದೇ ಒಂದು ಕನಸು

ಬಾಲ್ಯ ಮರಳಿ ಸಿಕ್ಕಿದರೆ
ಕಾಲ ಅಲ್ಲೇ ನಿಂತುಬಿಡಲಿ...........................

2 comments:

Unknown said...

ಬಾಲ್ಯ ಮರಳಿ ಸಿಕ್ಕಿದರೆ ವಾಸ್ತವಕ್ಕೆ ಜೊತೆಯಾದವನು ನಾಪತ್ತೆಯಾಗಿಬಿಡುತ್ತಾನೆ, ಹುಷಾರು! ವಾಸ್ತವಕ್ಕೆ ಜೊತೆಯಾದವನೂ ಬೇಕು, ಕನಸೂ ಬೇಕು- ಎಂಥ ವಿರೋಧಾಭಾಸ.
- ಸೀತಾಳಭಾವಿ

ಕೆನೆ Coffee said...

ಖಂಡಿತಾ. ಆದ್ರೆ ಇದು ಕನಸಷ್ಟೇ. ವಾಸ್ತವವನ್ನು ಒಪ್ಪಿಕೊಂಡರೂ ಕನಸುಗಳು ಇದ್ದೇ ಇರುತ್ತವಲ್ಲ. ಇರಬೇಕು ಕೂಡ. ಏನಂತೀರಿ?