Friday, September 12, 2008

ಬೀಗ ತೆರೆದಾಗ........

 ಕತ್ತಲೆ ಕೋಣೆಯ ನಡುವಿನ ಕಪ್ಪು ಕಿಟಕಿ ತೆರೆದೆ 
ಶತಮಾನಗಳ ಹಳೆಯ ಕಪಾಟು ಕಿರುಗುಟ್ಟಿತು 
ಅದರೆದೆಯ ಮಾಸಲು ಗಾಜಿನಲ್ಲಿ ನನ್ನ ಪ್ರತಿಬಿಂಬ ಎಷ್ಟನೆಯದೋ 

ಮುರಿದ ಕಾಲಿನ ಖುರ್ಚಿ ಹತ್ತಿ ಮೇಲೆ ಇಣುಕಿದರೆ  
ಎಂದೋ ಇಟ್ಟು ಮರೆತ ಪೆನ್ನು 
ಹರಿದ ಪಾಟೀಚೀಲ, ಬಳೆಚೂರು..... 
ಸತ್ತ ಹಾತೆಯ ರೆಕ್ಕೆಗೂ ವರ್ಷಗಳ ಇತಿಹಾಸ ! 

ಕೋಣೆಯ ಕಮಟು ವಾಸನೆ, ಅಪರೂಪಕ್ಕೆ ಬಿದ್ದ ಇಳಿಬಿಸಿಲು
ಏಕಾಂತ ಸುಖ 
ನಮದಿಬ್ಬರದು ಈಗ ದೂರದ ನೆಂಟಸ್ತನ 

ಕಪಾಟಿನೊಳಗಿನದು ಹೊಸದೇ ಪ್ರಪಂಚ  
ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ  
ಬಚ್ಚಿಟ್ಟು ಕಳೆದುಕೊಂಡ ಪ್ರೀತಿ,  
ಕದ್ದು ನೋಡುವ ನಗ್ನ ಚಿತ್ರ  
ಎಲ್ಲ ಬಯಲಾಗಿಬಿಡಬಹುದೇನೋ ....  

ಸ್ವಾತಂತ್ರ್ಯದ ಕಥೆ, ವಚನ ಭಾರತ ಅಜ್ಜನದ್ದಿರಬಹುದು  
ಕಸ್ತೂರಿಯ ಹರಿದ ಪುಟಗಳು, ಹಳೆಯ ತರಂಗ ಅಣ್ಣನದ್ದೇ ಸಂಗ್ರಹ  
ಅಮ್ಮ ಇಟ್ಟು ಮರೆತ ಹಾಡಿನ ಪಟ್ಟಿಯಲ್ಲವೇ ಇದು? 
ಕಾಲು ಮುರಿದ ಚಂದದ ಗೊಂಬೆ ನಂಗೆ ಅಪ್ಪ ತಂದುಕೊಟ್ಟಿದ್ದು 

ಕೋಣೆಯಲ್ಲಿನ ಪ್ರೀತಿಗೆ ಕಪಾಟು ನಾಚಿದ್ದಿರಬಹುದು  
ಜಗಳಗಳೂ ಹೊಸತೇನಲ್ಲ  
ಹೆಂಗಸರಿಗೆ೦ತದ್ದೋ ಸಂಶಯ  
ಕಪಾಟು ಗುಟ್ಟು ಬಿಟ್ಟುಕೊಟ್ಟ ನೆನಪಿಲ್ಲ 

ಕಪಾಟೊಳಗಿನ ಕನ್ನಡಿಯಲ್ಲಿ ಮುಖ ಕಾಣುವುದಿಲ್ಲ  
ಎಲ್ಲೆಡೆ ಎರಡಿಂಚು ನೆನಪಿನ ಧೂಳು ...... 
ವಿನ್ಯಾಸದ ಬಾಗಿಲಿಗೆ ಅಲ್ಲಲ್ಲಿ ಗಾಯದ ಗುರುತು  
ನುಸಿ ಗುಳಿಗೆಗಳು ಲಡ್ಡಾಗಿವೆ, ಗೆದ್ದಲಿಗೀಗ ನೆಮ್ಮದಿ 

ಬಾಗಿಲು ಮುಚ್ಚಿ ಮೇಲೊಂದು ಚಿಕ್ಕ ಬೀಗ ಅಷ್ಟೆ  
ಕಪಾಟು ಮಾತನಾಡುವುದಿಲ್ಲ  
ಕರುಬುತ್ತೇನೆ ನಾನು ಕಪಾಟಿನ ಗಟ್ಟಿತನಕ್ಕೆ  
ಮೌನ ನನ್ನಿಂದಾಗದ ಮಾತು  

ನನ್ನ ಮನದ ಕಪಾಟಿಗೆ ಬೀಗವಿಲ್ಲ  
ನನ್ನೆಲ್ಲ ಭಾವಗಳನ್ನೂ ಇಟ್ಟುಕೊಳ್ಳಬಹುದಿತ್ತು ಕಪಾಟು  
ನಾನು ಸುಖಿಯಾಗುತ್ತಿದ್ದೆ ...... 

2 comments:

Unknown said...

pls ನೀನು ಗದ್ಯ ಬರೆಯೋದು ಬಿಟ್ಟುಬಿಡು. ಏಕೆಂದ್ರೆ ಆಗ ಪದ್ಯ ಜಾಸ್ತಿ ಬರಿತೀಯಾ! nice poem

ಗೆಂಡೆತಿಮ್ಮ said...

ಆಹ್ಲಾದಕರವಾಗಿದೆ ಕಪಾಟಿನ ಕಮಟು ವಾಸನೆ ನುಸಿಗುಳಿಗೆಯ ಜೊತೆಗೂಡಿ. ಒಂದೊಂದು ಸಾಲಿನಲ್ಲೂ ಹಲವಾರು ಭಾವಗಳು."ಸತ್ತ ಹಾತೆಯ ರೆಕ್ಕೆಗೂ ವರ್ಷಗಳ ಇತಿಹಾಸ !".. I just loved this one.